Tuesday, April 19, 2011

ಮತ್ತೆ ಮಳೆ...!

ಮಳೆ ಬಂತೆಂದರೆ ಸಾಕು, ನೆನಪುಗಳ ಜಡಿಮಳೆ ಕೂಡ ಶುರು...

ಚಿಕ್ಕಂದಿನಲ್ಲಿ ಅಮ್ಮ ಕರಿಯುತ್ತಿದ್ದ ಬಿಸಿ ಬಿಸಿ ಹಪ್ಪಳ... ಸುರಿವ ಮಳೆಗೆ ಗಂಟೆ ಎಂಟಾರೂ ಏಳಲು ಮನಸಿಲ್ಲದೆ ಕೌದಿಯೊಳಗೆ ಮುದುರಿಕೊಳ್ಳುತ್ತಿದ್ದ ದಿನಗಳು... ಮಳೆ ಹೆಚ್ಚಾದರೆ ಶಾಲೆಗೆ ಸಿಗುತ್ತಿದ್ದ ರಜಾ... ಹೊದಿಕೆಯೊಳಗೆ ಸೇರಿಕೊಂಡು ತರಂಗವೋ ಸುಧಾವೋ ಯಾವುದಾದರೂ ಕಾದಂಬರಿಯೋ ಹಿಡಿದು ಓದತೊಡಗಿದರೆ ಜಗತ್ತೇ ಸುಂದರ... ಮಳೆಯ ಜತೆಗೆ ತಳಕುಹಾಕಿಕೊಂಡ ನೂರೆಂಟು ಕಥೆಗಳು... ಕನಸುಗಳು...

ಈಗಲೋ ಇದು ಬೆಂಗಳೂರ ಮಳೆ - ಡಿಫರೆಂಟ್ ಡಿಫರೆಂಟ್ - ಯಾವಾಗ ಬೇಕಾದರಾವಾಗ ಸುರಿವ ಬಿರುಮಳೆ... ಇದರ ಅನುಭವ ಬೇರೆಯೇ...

ಸದಾ ಹೊಸ್ತಿಲು ದಾಟಹೊರಡುವ ಪುಟ್ಟಿ ಮಳೆ ಬರುತ್ತಿದ್ದರೂ ಚಳಿಯಾಗುತ್ತಿದ್ದರೂ ಲೆಕ್ಕಿಸದೆ ಹೊಸ್ತಿಲು ದಾಟಹೊರಡುತ್ತಾಳೆ... ಅವಳನ್ನು ಹಿಡಿಯುವಷ್ಟರಲ್ಲೇ ಅರ್ಧ ಸುಸ್ತು! ಕೈಲಿ ಹಿಡಿದುಕೊಳ್ಳಲೂ ಬಿಡದೆ ಚಿಮ್ಮುವ ಅವಳಿಗೆ ಬೆಚ್ಚಗೆ ಬಟ್ಟೆ ಹಾಕಿ, ಗಿಲಕಿ ಮತ್ತು ಟೀಥರ್ ಕೈಲಿ ಕೊಟ್ಟು ಬಣ್ಣ ಬಣ್ಣದ ಪುಸ್ತಕ, ಗೊಂಬೆ ಇತ್ಯಾದಿ ಅವಳ ಸುತ್ತಲೂ ಇಟ್ಟು ರೂಮಿನೊಳಗೆ ಕುಳ್ಳಿರಿಸಿ 'ಹೊರಗೆ ಬರಬೇಡ ಗುಮ್ಮ ಬರ್ತಾನೆ' ಅಂತ ಹೇಳಿ ಆಟವಾಡಲು ಬಿಟ್ಟು ಹೊರಗೆ ಬಂದರೆ, ಉಸ್ಸಪ್ಪಾ!

ಅಚಾನಕ್ಕಾಗಿ ಬಂದ ಮಳೆಗೆ ಇನ್ನೇನು ಒಣಗುತ್ತಿದ್ದ ಬಟ್ಟೆಯೆಲ್ಲಾ ಮತ್ತೆ ನೆನೆದು, ಮತ್ತೆ ಅದನ್ನು ನಾಳೆ ಪುನ: ನೆನೆ ಹಾಕಬೇಕು, ದಿನವೂ ನಿಮ್ಮ ಬಟ್ಟೆಯೇ ಹಾಕುತ್ತೀರಿ, ನಮ್ಮ ಬಟ್ಟೆಗೆ ಜಾಗವಿಲ್ಲವಲ್ಲಾ ಎಂದು ಮನೆ ಓನರ್ ಕೈಲಿ ಹೇಳಿಸಿಕೊಳ್ಳಬೇಕಲ್ಲಾ ಎಂಬ ಕಳವಳ...
ಮಳೆ ಬರಬಹುದೆಂಬ ಅರಿವಿಲ್ಲದೆ ಕೊಡೆರಹಿತರಾಗಿ ಮನೆಯಿಂದ ಹೊರಗೆ ಹೋದವರು ವಾಪಸ್ ಹೇಗೆ ಬರುತ್ತಾರೋ ಎಂದು ಕಾತರ... ನೆನೆದುಕೊಂಡು ಬಂದವರಿಗೆ ತಲೆ ಒರಸಿ ಉಪಚಾರ... ಹಾಗೇ ಬಿಸಿ ಬಿಸಿ ಸೂಪಿಗೆ, ಕರಿದ ತಿಂಡಿಗೆ ಡಿಮಾಂಡಪ್ಪೋ ಡಿಮಾಂಡ್...

ಮಳೆಯೆಂದರೆ ಇಷ್ಟೇ ಅಲ್ಲ... ಆದರೆ ಈಗ, ಈ ಕ್ಷಣಕ್ಕೆ ಕಂಪ್ಯೂಟರ್ ಕೀಲಿಗೆ ನಿಲುಕಿದ್ದು ಇಷ್ಟು ಮಾತ್ರ. ವಾಚ್ಯಕ್ಕೆ ನಿಲುಕದೆ ಭಾವವಾಗಿ ಉಳಿದಿದ್ದು ಇನ್ನೆಷ್ಟೋ...

Friday, October 8, 2010

ಮುಂಗಾರು ಮಳೆಯೇ...

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ... ಮಹಾಮಾರಿ ಜನರಿಗೆ ಉರುಳೇ
ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ...
ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ
ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ...

ಎದುರು ರೋಡಿನಲ್ಲಿ.. ನೀರು ತುಂಬಿ ಹರಿವಾ ಒನಪು
ನನ್ನ ಮನೆಯ ಎದುರು.. ಕೆಂಪು ಮಣ್ಣ ಹೆಜ್ಜೆಯ ಗುರುತು
ಗುಡುಗು ಸಿಡಿಲಿನಾ ಅಡಚಿಕ್ಕು... ಏನು ರಭಸವೋ...
ಅಕ್ಕ ಪಕ್ಕದಾ ಮನೆಗಳಿಗೆ ನೀರು ನುಗ್ಗಿ ಚೆಲ್ಲಾಪಿಲ್ಲಿ
ಕಂಗಾಲಾದ ಮನುಜರ ನೋಡು.. ಯಾಕೆ ಹೀಗೆಯೋ...

ಮನೆಯು ಮುಳುಗಿ ಹೋಯ್ತು.. ಅಳುತ ನಿಂದ ಹೆಂಗಸರೆಲ್ಲಾ
ಇದ್ದಬದ್ದದ್ದೆಲ್ಲಾ.. ಕಟ್ಟಿ ಹೊರಟರು ಮೆರವಣಿಗೆ...
ನೆರೆಯು ಬರದ ಊರಿನ ಕಡೆಗೆ... ವಿಧಿಯ ಆಟವೋ...
ಕೂಡಿಇಟ್ಟುದೆಲ್ಲಾ... ಕಳೆದು ಹೋದ ದು:ಖವು ಕಾಡಿ
ನೆಲೆಯು ಇಲ್ಲದಾಗಿ ಹೋಗಿ... ಏನು ನೋವಿದೂ...
...............

ಎಂದೋ ಬರೆದಿದ್ದು, ಅರ್ಧಕ್ಕೇ ನಿಂತುಬಿಟ್ಟಿದೆ. ಮುಂಗಾರು ಮಳೆ ಪಿಚ್ಚರ್ ಬಿಡುಗಡೆಯಾದ ಸಮಯದಲ್ಲಿ ಬರೆದಿದ್ದು... ಅದಾದ ನಂತರ ಎರಡು ಮುಂಗಾರು ಮಳೆ ಸೀಸನ್ ಕಳೆದಿದೆ, ಈಗಂತೂ ಪಕ್ಕಾ ಹಿಂಗಾರು ಮಳೆ ಸೀಸನ್... ಬರೆಯುವುದು ಬಿಟ್ಟು ಎಷ್ಟು ಸಮಯವಾಗಿದೆಯೆಂದರೆ, ಮುಂದುವರಿಸುವುದು ಹೇಗೆಂದೇ ಹೊಳೆಯುತ್ತಿಲ್ಲ!

Sunday, February 14, 2010

ವ್ಯಾಲೆಂಟೈನ್ಸ್ ಡೇ ಮತ್ತು ಒಂದಿಷ್ಟು ಸ್ವಗತ

ವ್ಯಾಲೆಂಟೈನ್ಸ್ ಡೇ ಅಂದ್ರೆ ನನ್ನ ಪಾಲಿಗೆ ಮೊದಲೆಲ್ಲ ಎಲ್ಲಾ ದಿನಗಳಂತೆ ಅದೂ ಒಂದು ದಿನವಾಗಿತ್ತು. ಆಮೇಲೆ ಮಾಧ್ಯಮ ಜಗತ್ತಿಗೆ ಎಂಟ್ರಿ ಕೊಟ್ಟ ಮೇಲೆ ಆ ದಿನವನ್ನ ಆಚರಿಸುವವರಿಗೆ Good feeling ತರಲಿಕ್ಕೆ ಸಹಾಯ ಮಾಡುವ ಕೆಲಸ ನಮ್ಮದು ಅಂತ ಅರ್ಥವಾಯ್ತು. ಆದರೆ ಕಳೆದ 2 ವರ್ಷಗಳಿಂದ, ಈ ದಿನ ಬಂತೆಂದರೆ ಸಾಕು, ಎಲ್ಲಿ ಏನು ಗಲಾಟೆಯಾಗುತ್ತದೋ ಅಂತ ಕಾಯಲು ಆರಂಭಿಸಿರುವುದು ವಿಚಿತ್ರವಾದರೂ ಸತ್ಯ. ಈಬಾರಿಯೂ ಅಷ್ಟೆ, ಗಲಾಟೆಯೋ ಗಲಾಟೆ.
-----------------------------------------------------
ಪ್ರೇಮಯುದ್ಧ - ನಮ್ಮ ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮ. ಅದರ ಶೂಟಿಂಗ್ ಟೀಮ್ ಕಾರ್ಯಕ್ರಮ ಶೂಟ್ ಮಾಡಿಕೊಂಡು ಬರಲು ಹೋಗಿದ್ದು ಗೊತ್ತಿತ್ತು. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿ, ಸುದ್ದಿಯ ಪಾಡಿಗೆ ಸುದ್ದಿ ಶಾಂತವಾಗಿ ಹೋಗುತ್ತಿದ್ದ ಸಮಯ. ಇದ್ದಕ್ಕಿದ್ದಂತೆ ಇನ್ನೊಂದು ಚಾನೆಲ್ಲಿನಲ್ಲಿ ಬ್ರೇಕಿಂಗ್ ನ್ಯೂಸ್ ಬರಲು ಆರಂಭವಾಯ್ತು, ಟೌನ್ ಹಾಲ್ ಬಳಿ ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಅಂತ. ನಮಗೂ ಸುದ್ದಿ ಬಂತು, ನಮ್ಮ ಕಾರ್ಯಕ್ರಮದಲ್ಲೇ ನಡೆದಿದ್ದು ಈ ಕೆಲಸ ಅಂತ. ಎಲ್ಲರಿಗೂ ಏನು ನಡೆಯುತ್ತಿದೆ ಅಂತ ಸರಿಯಾಗಿ ಗೊತ್ತಾಗದ ಪರಿಸ್ಥಿತಿ.
ಅಷ್ಟರಲ್ಲಿ ಪಕ್ಕದ ಚಾನೆಲ್ ಮಸಿಬಳಿಯುವ ನೀಟಾದ ದೃಶ್ಯಗಳನ್ನು ಕೊಡಲಾರಂಭಿಸಿತು. ಅಚಾನಕ್ ಆದಂತಹ ಈ ಮಸಿ ಬಳಿವ ಕೆಲಸದ ಬಗ್ಗೆ ಸ್ವಲ್ಪವೂ ಕೂಡ ಐಡಿಯಾ ಇಲ್ಲದ ಕಾರಣ ನಮಗೆ ಆ ದೃಶ್ಯಗಳು ಸಿಕ್ಕಿಲ್ಲವೆಂಬುದು ಕೂಡ ಗೊತ್ತಾಯಿತು. ನಂತರ ಬಂದಂತಹ ದೃಶ್ಯಗಳಲ್ಲಿ ಪೊಲೀಸರು ಕೂಡ ಕಾಣಿಸಿಕೊಂಡರು. ನಂತರ ನಡೆದ ವಾಗ್ವಿವಾದದ ಸಮಯ, ಮುತಾಲಿಕ್ ಬೆಂಬಲಿಗರಲ್ಲಿ ಪ್ರಮುಖನೊಬ್ಬ ವಿಮಲಾ ಮೇಡಂ ಮುಖಕ್ಕೆ ಉಗಿದು ಬಿಟ್ಟ. 4-5 ವರ್ಷಗಳಿಂದ ವಿಮಲಾ ಮೇಡಂ ಪರಿಚಯ ನನಗೆ. ಇವರು ಮುತಾಲಿಕ್ ಅಥವಾ ಬಜರಂಗಿಗಳ ಸಿದ್ಧಾಂತವನ್ನು ವಿವಿಧ ವೇದಿಕೆಗಳಲ್ಲಿ ವಿರೋಧಿಸುತ್ತಲೇ ಬಂದವರು. ಬರಿಯ ವಾಗ್-ವಿರೋಧಕ್ಕಾಗಿಯೇ ಮುತಾಲಿಕ್ ಬೆಂಬಲಿಗರ ವಿರೋಧ ಕಟ್ಟಿಕೊಂಡವರು. ಕಳೆದ ವರ್ಷ ಪತ್ರಿಕೆಯೊಂದು ನಡೆಸಿದ್ದ ಕಾರ್ಯಕ್ರಮದಲ್ಲಿ ಮೊನ್ನೆ ಅವರ ಮುಖಕ್ಕೆ ಉಗಿದಾತ ಬೆದರಿಕೆ ಕೂಡ ಹಾಕಿದ್ದ ಎಂದು ವಿಮಲಾ ಮೇಡಂ ಹೇಳಿದ ನೆನಪು ನನಗೆ.
ಕಳೆದ ವರ್ಷ ಪಬ್ ಅಟಾಕ್ ಸಂಬಂಧ ಚರ್ಚೆಗೆ ಬಂದಿದ್ರು ಮೇಡಂ ಕಸ್ತೂರಿಗೆ, ಅವಾಗ ಮೇಡಂ ಹತ್ರ ಕೇಳಿದ್ದೆ, ಇವರ ಜತೆ ಚರ್ಚೆ ಮಾಡಿದ್ರೆ ಇವ್ರು ಸರಿ ಹೋಗ್ತಾರಾ ಮೇಡಂ, ವೇಸ್ಟ್ ಆಫ್ ಎನರ್ಜಿ ಅಲ್ವಾ ಅಂತ. ಇದು ವಿಚಾರಕ್ಕೆ ಸಂಬಂಧಿಸಿದ್ದಾದ ಕಾರಣ ವೈಚಾರಿಕವಾಗಿಯೇ ಎದುರಿಸಬೇಕು, ಚರ್ಚೆ ಮಾಡಿ ಮಾಡಿಯೇ ಸರಿ ಹೋಗಬಹುದೇ ಹೊರತು ದಂಡ ಮಾರ್ಗದಿಂದಲ್ಲ ಅನ್ನುವುದು ವಿಮಲಾ ಮೇಡಂ ನಿಲುವಾಗಿತ್ತು, ಇಂದು ಕೂಡ ಅದೇ ಮಾತೇ ಅವ್ರು ಹೇಳ್ತಾರೆ.
-----------------------------------------------------
TV9 ನಿಂದ ತೆಗೆದುಕೊಂಡ ಮಸಿ ಬಳಿವ ವಿಶುವಲ್ಸ್ ಹಾಕಿಕೊಂಡ TIMES NOW, SELF-STYLED MORAL POLICEMAN GETS THE TASTE OF HIS OWN MEDICINE ಅಂದಿತು. ನನಗೆ ಪಬ್ ಅಟಾಕ್ ಮತ್ತೊಮ್ಮೆ ನೆನಪಾಯಿತು.
-----------------------------------------------------
ಮಸಿ ಬಳಿದವರನ್ನು ಬಂಧಿಸಲಾಯಿತು, ಕೆಲವು ಕಾಂಗ್ರೆಸ್ಸಿಗರು ನಮ್ಮವರು ಮಾಡಿರುವುದಿಲ್ಲ ಇಂಥಾ ಕೆಲಸ ಅಂದ್ರು. ಇನ್ನು ಕೆಲವರು ಟೈಮ್ಸ್ ನವ್ ಧಾಟಿಯಲ್ಲೇ ಮಾತಾಡಿದ್ರು. ಮತ್ತೆ ಕೆಲವ್ರು ಅವರವರ ಸ್ವಂತ ಇಚ್ಛೆಯಿಂದ ಮಾಡಿದ ಕೆಲಸ, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಇದು ಅಂದ್ರು. ಮತ್ತೆ ಕೆಲವ್ರು ಅವ್ರನ್ನ ಬಂಧಿಸಿಟ್ಟಿದ್ದ ಪೊಲೀಸ್ ಠಾಣೆಗೇ ಭೇಟಿ ಕೊಟ್ಟು ನಮ್ಮ ಕ್ಯಾಮರಾಕ್ಕೆ ಸಿಗಾಕ್ಕೊಂಡ್ರು. ಮುಖಕ್ಕೆ ಮಸಿ ಬಳಿದೋರ್ನ ಬಿಡೋದಿಲ್ಲ ಅಂತ ಮುತಾಲಿಕ್ ಹೇಳಿಕೆ, ಅಂದ್ರೆ ಕಥೆ ಇಲ್ಲಿಗೇ ನಿಲ್ಲೂದಿಲ್ಲ ಅಂತ ಅರ್ಥ... There is more to come.
-----------------------------------------------------
ವಿಮಲಾ ಮೇಡಂ ಮುಖಕ್ಕೆ ಉಗಿದವ ಬಿಂದಾಸ್ ಆಗಿ ತಿರುಗಾಡ್ತಿದ್ದ. ಸಂಜೆ ನಮ್ಮ ಆಫೀಸಲ್ಲಿ ಡಿಸ್ಕಶನ್ ಇತ್ತಲ್ಲ, ಅಲ್ಲಿಗೂ ಬಂದಿತ್ತು ಕೋತಿ ಸೇನೆ, ಅವನೂ ಬಂದಿದ್ದ. ಬಾಯಲ್ಲಿ ಹೆಂಗಸರು ಅಂದ್ರೆ ದೇವ್ರು ಅದೂ ಇದೂ ಅಂತ ಬಾಯಲ್ಲಿ ಹೊಗೆ ಬಿಡುವ ಪಾರ್ಟಿಗಳು, ಮಹಿಳೆಯರು ಪಬ್-ನಲ್ಲಿ ಕೂರಬಾರದು ಅಂತ ಹೆಂಗಸರಿಗೆ ಹೊಡೆದು ಹೋರಾಡಿದ(!) ಪಾರ್ಟಿಗಳು, ಅದ್ಯಾಕೆ ನೀಟಾಗಿ ಸೀರೆಯುಟ್ಟಿದ್ದ ಅಪ್ಪಟ ಭಾರತೀಯ ನಾರಿಯಾಗಿಯೇ ಕಾಣುವ ಗೌರವಾನ್ವಿತ ಮಹಿಳೆಯೋರ್ವಳ ಮುಖದ ಮೇಲೆ ಉಗಿಯುವ ಸಂಸ್ಕೃತಿ ಬೆಳೆಸಿಕೊಂಡರೋ ಗೊತ್ತಾಗಲಿಲ್ಲ.
-----------------------------------------------------
ಲವ್ ಜೆಹಾದ್ ಆರೋಪಕ್ಕೆ ಒಳಗಾಗಿದ್ದ ಇರ್ಫಾನ್-ಅಶ್ವಿನಿ ಮತ್ತು ತೌಫೀಕ್-ಸಹನಾ ಜೋಡಿ, ರವಿ ಬೆಳಗೆರೆ ಜತೆಗೆ ಭಾಗವಹಿಸಿದ್ದ ಕಾರ್ಯಕ್ರಮ, 'ಅಹಂ ಪ್ರೇಮಾಸ್ಮಿ' . ಇದು ನೋಡಿದ ಮೇಲೆ ಅನಿಸಿದ್ದು, ಇಸ್ಲಾಂ ಧರ್ಮ ಸ್ವಲ್ಪ ಲಿಬರಲ್ ಆಗಿ ಬದಲಾಗಿದ್ರೆ ಬಹುಶ: ಈ ಲವ್-ಜೆಹಾದ್ ಅನ್ನುವ ಐಡಿಯಾವೇ ಯಾರ ತಲೆಗೂ ಬರ್ತಿರಲಿಲ್ಲ.
ಹಿಂದೂ ಧರ್ಮದಲ್ಲಿಯೂ ಬೇಕಾದಷ್ಟು ಅರೆಕೊರೆಗಳಿರಲಿಲ್ವಾ, ಈಗ ಎಲ್ಲಾ ಕಾಲಕ್ಕೆ ತಕ್ಕ ಹಾಗೆ ತಿದ್ದಿಕೊಂಡು ಮುಂದೆ ಹೋಗ್ತಾ ಇಲ್ವಾ? ಸತೀ ಪದ್ಧತಿ, ಬಾಲ್ಯವಿವಾಹ ಇತ್ಯಾದಿಗಳ ತಡೆಗೆ ಕಾಯಿದೆ-ಕಾನೂನುಗಳ ಸಹಕಾರವಿದೆ. ಆದರೆ ಮುಸ್ಲಿಂ ಮದುವೆಗಳ ರೀತಿ ಬೇರೆ. ಇವು ಪ್ರೇಮವಿವಾಹ ಅಥವಾ ಅಂತರ್ಜಾತೀಯ ವಿವಾಹವೇ ಆದರೂ, ಶೆರಿಯತ್-ನ ನಿಯಮಗಳಿಗನುಸಾರವಾಗಿ ಮುಸ್ಲಿಂ ಧರ್ಮಗುರುಗಳ ಸಮಕ್ಷಮದಲ್ಲಿ ವಿವಾಹವಾದರೆ ಮಾತ್ರ ಮಾನ್ಯವಾಗುತ್ತವೆ. ಅಂತರ್ಜಾತೀಯ ವಿವಾಹಗಳಿಗೆ ಒಪ್ಪಿಗೆ ನೀಡಿರುವ ಇಸ್ಲಾಂ, ಅನ್ಯಧರ್ಮೀಯರು ಮುಸ್ಲಿಂ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕಾದರೆ, ತಮ್ಮ ಧರ್ಮವನ್ನು ಮುಸ್ಲಿಂ ಧರ್ಮಕ್ಕೆ ಬದಲಾಯಿಸಿಕೊಳ್ಳಬೇಕಾದುದು ಕಡ್ಡಾಯವೆಂಬ ನಿಯಮ ರೂಢಿಯಲ್ಲಿಟ್ಟಿದೆ. ಇದೇ ಎಲ್ಲಾ ಗೊಂದಲಕ್ಕೂ ಮೂಲ. ಪ್ರೇಮಕ್ಕೂ ಭಯೋತ್ಪಾದನೆಯ ಬಣ್ಣ ಬರಲು ಕಾರಣ. ಬಹುಶ: ಹಿಂದೂ ಧರ್ಮದ ಹಾಗೇ ಇಸ್ಲಾಂ ಕೂಡ ಕೆಟ್ಟದನ್ನು, ಕಾಲಕ್ಕೆ ಸಲ್ಲದ್ದನ್ನು ಕಳಚಿಕೊಳ್ಳುವ ಹಾಗಿದ್ರೆ ಚೆನ್ನಾಗಿತ್ತು, ಜಗತ್ತಲ್ಲಿ ಶಾಂತಿಗೆ ಸ್ವಲ್ಪ ಹೆಚ್ಚು ಜಾಗ ಇರ್ತಿತ್ತು...
ಇದು ಧರ್ಮದ ಮಾತಾಯ್ತು. ಆದರೆ ಇಂದಿನ ದಿನದಲ್ಲಿ ಧರ್ಮಕ್ಕಿಂತ INDIVIDUAL DECISIONS ಹೆಚ್ಚು ತೂಕದ್ದು ಅಂತ ನನ್ನ ಭಾವನೆ. ಮುಸ್ಲಿಂ ಹುಡುಗನ ಜತೆಗೆ ಬದುಕು ಕಟ್ಟಿಕೊಂಡಿರುವ ನನ್ನ ಗೆಳತಿ ಹೆಸರು ಬದಲಾಯಿಸಿಕೊಂಡಿಲ್ಲ, ದೇವರನ್ನು ನಂಬದ ಆಕೆ ನಮಾಜು ಮಾಡುವುದಿಲ್ಲ. ಆಕೆಯ ಸಂಗಾತಿಯೂ ಒತ್ತಾಯಿಸಿಲ್ಲ. ಆದರೆ ಅವರ ಪಾಲಿಗೆ ಬದುಕೇನೂ ನಿಂತಿಲ್ಲ, ನಡೆಯುತ್ತಲೇ ಇದೆ.
ಆ ಇಬ್ರೂ ಹುಡುಗಿಯರು ಹೆಸರು ಬದಲಾಯಿಸಿಕೊಂಡಿದ್ದಾರೆ, ಬುರ್ಖಾ ಹಾಕ್ತಾರೆ. ಅವರಲ್ಲಿ ಒಬ್ಳು ಹೇಳಿದ್ಲು, ಮೊದ್ಲು ಇಸ್ಲಾಂನ ಇಷ್ಟ ಪಟ್ಟೆ, ಹಾಗೇ ಇಸ್ಲಾಂ ಇಷ್ಟಪಡೋ ಹುಡುಗನ್ನೂ ಇಷ್ಟ ಪಟ್ಟೆ ಅಂತ. ನಿಜವಾಗಿ ಅವರ ಕೇಸಲ್ಲಿ ಪ್ರೀತಿ ಮೊದಲು ಹುಟ್ಟಿತ್ತು, ನಂತರ ಬಂದಿದ್ದು ಜಾತಿ. ಇದೇ ಪಾಯಿಂಟ್ ಮುಂದಿಟ್ಟು ಅವ್ರು ಕೋರ್ಟಲ್ಲೂ ಗೆದ್ದಿದ್ದು. ಹೀಗಾಗಿ ಈ ಡೈಲಾಗು ನಂಗ್ಯಾಕೋ ಸ್ವಲ್ಪ ಓವರ್ ಆಯ್ತು ಅನಿಸಿತು... ಈಗ ಇಸ್ಲಾಂ ಧರ್ಮ ಫಾಲೋ ಮಾಡ್ತಿರೋದಕ್ಕೆ ಅನಗತ್ಯವಾಗಿ ಬೇಕಾದ್ದಕ್ಕಿಂತ ಹೆಚ್ಚು ಸಮರ್ಥನೆ ಕೊಡ್ತಿದಾಳೆ ಅನಿಸ್ತು. ಸೋ ಕಾಲ್ಡ್ ಲವ್ ಜೆಹಾದ್ ಬಗ್ಗೆ ಇಷ್ಟೆಲ್ಲಾ ಬರೀಬೇಕು ಅನಿಸಿತು.
-----------------------------------------------------
ನನ್ನ ಎಲ್ಲಾ ತಾಕಲಾಟಗಳ ನಡುವೆ ಲೈಫ್ ಕೊಟ್ಟಿರೋ ಗಿಫ್ಟ್ ನನ್ನವ... he makes life easier to live. ವ್ಯಾಲೆಂಟೈನ್ಸ್ ಡೇ ದಿನ ಬೇರೆಲ್ಲಾ ಬರೆದು, ಇವನ ಬಗ್ಗೆ ಮಾತ್ರ ಬರೀದಿದ್ರೆ ಹ್ಯಾಗೆ? ನಿನ್ನೆ ಪೂನಾದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ತಿಂಗಳಿಗೆ ಎರಡು ಸರ್ತಿ ಪೂನಾಕ್ಕೆ ಭೇಟಿ ನೀಡುವ ನನ್ನವ, ನಾಡಿದು ಮತ್ತೆ ಪೂನಾಕ್ಕೆ ಹೋಗ್ತಾನೆ. 'ಪೂನಾಕ್ಕಾ...' ಅಂತ ಗಾಬರಿ ಕಣ್ಣು ತೋರಿಸಿದ್ದಕ್ಕೆ, ಈಗಷ್ಟೇ ಬಾಂಬ್ ಬ್ಲಾಸ್ಟ್ ಆಯ್ತಲ್ಲ, ಇನ್ನು 15 ದಿನ ಸೆಕ್ಯೂರಿಟಿ ಹೆಚ್ಚಾಗಿರುತ್ತೆ, ನಥಿಂಗ್ ಟು ವರಿ ಅಂತ ನಕ್ಕುಬಿಟ್ಟ. ಕಳ್ಳ.

Tuesday, July 14, 2009

ಕಳೆದುಕೊಳ್ಳುವ ಬಗೆಗೊಂದು ಸ್ವಗತ...

ಎರಡು ವರ್ಷದ ಹಿಂದಿನ ಕಥೆ. ಅವತ್ತೊಂದು ದಿನ ಬನ್ನೇರುಘಟ್ಟದಲ್ಲಿರುವ ಅತ್ತಿಗೆಯ ಮನೆಯಿಂದ ವಾಪಸ್ ಹೊರಟವಳು ಗೆಳತಿಯ ಮನೆಗೆ ಹೋಗುವ ಬಸ್ಸಿನಲ್ಲಿ ಕೂತಿದ್ದೆ. ಅರ್ಧ ದಾರಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹೆಂಗಳೆಯೊಬ್ಬಳು ತನ್ನ ಮಗುವನ್ನು ನನ್ನ ಮಡಿಲಲ್ಲೇರಿಸಿದಳು. ಮಗುವನ್ನು ನೀಟಾಗಿ ನನ್ನ ಮಡಿಲಲ್ಲಿ ಅವಳು ಕೂರಿಸುವಾಗ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದ ಮಗುವಿನ ಮುಖ ನೋಡ್ತಾ ಇದ್ದೆ. ಅವಳು ಕೂರಿಸಿಯಾದ ಮೇಲೆ ಮಗುವನ್ನು ನಾನು ಹಿಡಿದುಕೊಂಡು ಕೂತೆ.

ಸ್ವಲ್ಪ ದೂರ ಹೋದನಂತರ ಆಕೆ ಮಗುವನ್ನು ನನ್ನ ಮಡಿಲಿನಿಂದ ತೆಗೆದುಕೊಂಡು ಬಸ್ ಇಳಿದಳು. ಅದ್ಯಾಕೋ ಅವಳು ಸ್ವಲ್ಪ ಜಾಸ್ತಿಯೇ ನನ್ನ ಮಡಿಲು ತಡಕಿದಳೇನೋ ಅಂತನಿಸಿದರೂ ಅದೇಕೋ ಆಕಡೆ ಗಮನ ಕೊಡಲಿಲ್ಲ.

ನಂತರ ಜಯನಗರದಲ್ಲಿ ಬಸ್ಸಿಂದ ಇಳಿಯುವಾಗ ಪರ್ಸ್ ಝಿಪ್ ತೆರೆದಿದ್ದು ಗಮನಕ್ಕೆ ಬಂತು. ಆಗಲೂ ನನಗೇನೂ ಅನಿಸಲಿಲ್ಲ. ಝಿಪ್ ಹಾಕಿಕೊಂಡು ಆಟೋ ಹಿಡಿದು, ವಿದ್ಯಾಪೀಠ ಸರ್ಕಲ್ಲಿಗೆ ಹೋದೆ. ಅಲ್ಲಿ ಫ್ರೆಂಡ್ ಮನೆಯ ಹತ್ತಿರ ಇಳಿದು ದುಡ್ಡಿಗೆಂದು ಪರ್ಸ್ ತಡಕಾಡಿದರೆ- ಬ್ಯಾಂಕಿಗೆ ಹಾಕಬೇಕೆಂದು ಬ್ಯಾಗಲ್ಲಿಟ್ಟುಕೊಂಡಿದ್ದ ಉಳಿತಾಯದ 9,500 ರೂಪಾಯಿ ಇದ್ದ ಕಟ್ಟು ಕಾಣೆ... ಕಳ್ಳಿ ಮೊಬೈಲ್ ಉಳಿಸಿಹೋಗಿದ್ದಳು. ಗೆಳತಿಯ ಮನೆ ಅಲ್ಲೇ ಇದ್ದ ಕಾರಣ ಆಟೋ ಚಾರ್ಜ್ ಕೊಟ್ಟು ಬಚಾವಾದೆ. (ಪೊಲೀಸ್ ಹತ್ತಿರ ದೂರು ಕೊಡಲಿಕ್ಕೆ ಹೋಗಿದ್ದೆ, ಆಕಥೆ ಇನ್ನೊಮ್ಮೆ ಹೇಳ್ತೀನಿ)

--------------------------------

ವರ್ಷದ ಹಿಂದಿನ ಕಥೆ. ಒಂದು ಮಧ್ಯಾಹ್ನ. ಐಸಿಐಸಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಬಂತು. ಏನೆಂದು ಕೇಳಿದರೆ, "ನೀವು ನಿನ್ನೆ ಮಾಡಿದ ಖರೀದಿಯನ್ನು ಇಎಂಐ ಮೂಲಕ ಕಟ್ಟಬಹುದು, ತಿಳಿಸಲಿಕ್ಕೆ ಕರೆ ಮಾಡಿರುವೆವು" ಎಂದರು. ಆ 'ನಿನ್ನೆ' ನಾನೆಲ್ಲೂ ಕ್ರೆಡಿಟ್ ಕಾರ್ಡ್ ಉಜ್ಜಿರಲಿಲ್ಲವಾದ್ದರಿಂದ ಇವರು ಯಾವುದರ ಬಗ್ಗೆ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ. ಕೇಳಿದರೆ ಹೇಳಿದರು, ನಾನು 37,000+ ಮೌಲ್ಯದ ವಿಮಾನದ ಟಿಕೆಟ್-ಗಳು ಕ್ರೆಡಿಟ್ ಕಾರ್ಡ್ ಮೂಲಕ ಹಿಂದಿನ ದಿನ ಖರೀದಿಸಿದ್ದೆನಂತೆ.

ಕೂಡಲೇ ಎಚ್ಚತ್ತ ನಾನು, ನಾನು ಖರೀದಿಸಿಯೇ ಇಲ್ಲವೆಂದು ಹೇಳಿದೆ. ಸ್ವಲ್ಪ ವಿಚಾರಣೆ ನಡೆಸಿ ನಾನು ಆಸಮಯದಲ್ಲಿ ಬೇರೇನೋ ಮಾಡುತ್ತಿದ್ದೆ, ಮತ್ತು ಕ್ರೆಡಿಟ್ ಕಾರ್ಡ್ ನನ್ನ ಹತ್ತಿರವೇ ಇತ್ತು, ಬೇರೆಲ್ಲೂ ಹೋಗಿರಲಿಲ್ಲ ಎಂಬ ಉತ್ತರ ಪಡೆದ ನಂತರ, ಆಕೆ ನನಗೆ ಕೂಡಲೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಡಿವಿಜನ್ನಿಗೆ ಟ್ರಾನ್ಸಾಕ್ಷನ್ ಡಿಸ್ಪ್ಯೂಟ್ ಹಾಕಲು ಹೇಳಿದಳು. ಕೊನೆಗೆ ಅದೇನೇನು ಮಾಡಬೇಕೋ ಎಲ್ಲಾ ಮಾಡಿ, ಬ್ಯಾಂಕಿಗೆ ನಾನು ಮಾಡಿದ ಖರೀದಿಯಲ್ಲವೆಂಬುದನ್ನು ತಿಳಿಯಪಡಿಸಿದೆ. ಅವರು ಒಪ್ಪಿಕೊಂಡು ನನ್ನ ಬಿಲ್-ನಿಂದ ತಾತ್ಕಾಲಿಕವಾಗಿ ಅದನ್ನು ತೆಗೆಯುತ್ತೇವೆಂದರು. ಒಂದು ವೇಳೆ ತಮ್ಮ ತನಿಖೆಯಲ್ಲಿ ನಾನೇ ಖರೀದಿಸಿದ್ದೆಂದು ಪ್ರೂವ್ ಆದರೆ ಮಾತ್ರ ಅದನ್ನು ನಾನೇ ಕಟ್ಟಬೇಕಾಗುತ್ತದೆಂದು ಎಚ್ಚರಿಸಿದರು. ನಾನು ಖರೀದಿಯೇ ಮಾಡಿಲ್ಲವಾದ ಕಾರಣ ಅವರು ಸಾಧಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ನಾನು ಭರವಸೆ ನೀಡಿದೆ.

ಕೆಲ ದಿನ ಬಿಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಬಂತು. ಅದರಲ್ಲಿ ನಾನು ಕಟ್ಟಬೇಕಿರುವ ದುಡ್ಡು ಸೊನ್ನೆ ರೂಪಾಯಿಯಿತ್ತು, ನನಗೆ ದುಡ್ಡು ಬರಬೇಕಿತ್ತು. ಏನೆಂದು ಚೆಕ್ ಮಾಡಿದರೆ, ವಿಮಾನ ಟಿಕೆಟ್ ಖರೀದಿಸಿದಾಗ ಅದರಲ್ಲಿ 5% cash-back offer ಇದ್ದುದರಿಂದ 1800 ರೂಪಾಯಿಯಷ್ಟು ನನ್ನ ಅಕೌಂಟಿಗೆ ವಾಪಸ್ ಬಂದು, ನಾ ಕಟ್ಟಬೇಕಿರುವ 1700+ರಷ್ಟು ದುಡ್ಡು ಮಾಫಿಯಾಗಿತ್ತು..!

--------------------------------

ಇವತ್ತು ಶಿವಾಜಿನಗರದಲ್ಲಿ ಬಸ್ಸಿಗೆ ಕಾದುನಿಂತಿದ್ದೆ. ಬಸ್ ಬಂತು, ಸಹಜವಾಗಿಯೇ ರಶ್ ಇತ್ತು. ನೂಕುನುಗ್ಗಲಿನಲ್ಲಿ ಬಸ್ಸಿಗೆ ಹತ್ತುವಾಗ ನನ್ನ ಹಿಂದಿದ್ದವಳ ಕೈ ನನ್ನ ಹ್ಯಾಂಡ್ ಬ್ಯಾಗಿನ ಬದಿಯಲ್ಲಿ ಝಿಪ್ ತೆರೆಯಲು ಯತ್ನಿಸುತ್ತಿದ್ದುದು ಅನುಭವಕ್ಕೆ ಬಂತು. ಮೆಲ್ಲಗೆ ನೋಡಿ ವಿಷಯ ಹೌದೆಂದು ಕನ್-ಫರ್ಮ್ ಮಾಡಿಕೊಂಡೆ. ಬ್ಯಾಗ್ ಹಾಕಿಕೊಂಡಿದ್ದ ಕೈಯಿಂದ ಆಕೆಯ ಕೈಹಿಡಿದೆ. ಬಿಡಿಸಿಕೊಳ್ಳಲು ಯತ್ನಿಸಿದಳು. ನಾ ಬಿಡಲಿಲ್ಲ. ಹಾಗೇ ಹಿಂತಿರುಗಿ ನೋಡಿ "ಏನ್ರೀ ಮಾಡ್ತಿದೀರಾ, ಮರ್ಯಾದಸ್ತರ ಥರ ಕಾಣ್ತೀರಾ, ಮಾಡೋದು ಇಂಥಾ ಕಚಡಾ ಕೆಲಸಾನಾ" ಅಂತ ರೋಪ್ ಹಾಕಿದೆ.

ಆಕೆ ತಕ್ಷಣ ಕೈಬಿಡಿಸಿಕೊಂಡಳು, "ನಾನೇನು ಮಾಡಿದೀನಿ, ನನ್ನ ಪಾಡಿಗೆ ಬಸ್ಸಿಗೆ ಹತ್ತುತಾ ಇದ್ದೀನಿ" ಅಂದಳು. ಬಸ್ಸಿಗೆ ಹತ್ತೋರು ನನ್ "ಬ್ಯಾಗಿಗೆ ಯಾಕ್ ಕೈಹಾಕ್ತಿದೀರಾ" ಅಂದೆ. "ಹಿಡ್ಕೊಳ್ಳೋಕೆ ಏನೂ ಸಿಕ್ಕಿಲ್ಲ, ಹಾಗಾಗಿ ಬ್ಯಾಗ್ ಹಿಡಿದೆ" ಎಂದಳು. ಉಳಿದವರು ನಮ್ಮ ಜಗಳ ನೋಡುತ್ತಿದ್ದರು. ಆದರೆ ಆಕೆ ಕದಿಯಲು ಹೊರಟವಳೆಂದು ಸಾಧಿಸಲು ನನ್ನಲ್ಲೇನೂ ಇರಲಿಲ್ಲವಾದ ಕಾರಣ ಕೊನೆಗೆ ನಾನೇ ಸುಮ್ಮನಾದೆ. ಆಕೆ ತನ್ನನ್ನು ಕಳ್ಳಿಯೆಂದ ನನಗೆ ಹಿಡಿಶಾಪ ಹಾಕುತ್ತಿದ್ದಳು.

---------------------------------

ಕಳ್ಳರು ಬೇರೆ ಬೇರೆ ರೀತಿಯಲ್ಲಿರುತ್ತಾರೆ. ಕೆಲವರಿಗೆ ದೋಚುವುದು ಬದುಕಲಿಕ್ಕಿರುವ ಅನಿವಾರ್ಯತೆ. ಇನ್ನು ಕೆಲವರಿಗೆ ಕದಿಯುವುದು ಚಟ. ಕೆಲವರು ದೋಚಿದ್ದು ಗೊತ್ತೇ ಆಗುವುದಿಲ್ಲ - ತುಂಬಾ ಸೊಫಿಸ್ಟಿಕೇಟೆಡ್ ಆಗಿ ಕೃತ್ಯವನ್ನು ಗೈದಿರುತ್ತಾರೆ, ಮತ್ತು ಅದಕ್ಕೇನಾದರೂ ಹೆಸರು ಕೂಡ ಇಟ್ಟಿರುತ್ತಾರೆ. ಕದ್ದಿದ್ದನ್ನು ಅಥವಾ ದೋಚಿದ್ದನ್ನು ಒಪ್ಪಿಕೊಳ್ಳುವ ಕಳ್ಳರು ತುಂಬಾ ಕಡಿಮೆ. ಕದಿಸಿಕೊಳ್ಳುವುದು, ಕಳೆದುಕೊಳ್ಳುವುದು ನನಗೆ ಅಭ್ಯಾಸವಾಗಿಹೋಗಿದೆ.

ಹಾಗೆಂದು ಬದುಕಲ್ಲಿ ಕಳೆದುಕೊಳ್ಳಲು ಬೇಜಾರಿರಲಿಲ್ಲ ನನಗೆ... ಬದುಕೆಂದರೆ ಕಳೆಯುವ-ಕೂಡುವ ಲೆಕ್ಕಾಚಾರ ಎಂಬ ಮಾತು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡಿದವಳು ನಾನು.

ಆದರೆ, ಇತ್ತೀಚೆಗೆ ಮಾತ್ರ, ನಿಜ, ಬದುಕೆಂದರೆ ಕೂಡುವುದು - ಕಳೆಯುವುದು ಬಿಟ್ರೆ ಇನ್ನೇನೂ ಇಲ್ಲ ಅಂತ ಅನಿಸ್ತಿದೆ. ಬರೀ ಕಳೆದುಕೊಳ್ಳುವುದರಿಂದ ಏನು ಸಾಧಿಸ್ತೀನಿ, ಬದುಕಿಡೀ ಇದೇ ಆದರೆ, ಪಡೆದುಕೊಳ್ಳುವುದು ಯಾವಾಗ ಅಂತ ಅನಿಸ್ತಿದೆ. ಏನು ಪಡೆದೆವೋ ಅದು ಮಾತ್ರ ಕೊನೆಗೆ ಬದುಕ ಬುತ್ತಿಯಲ್ಲುಳಿಯುತ್ತದೆ, ನಮ್ಮನ್ನು ಅಳೆಯುವವರೂ ಅದರ ಮೂಲಕವೇ ಅಳೆಯುತ್ತಾರೆ... ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುವುದು ಉಪಯೋಗವಿಲ್ಲ, ಪಡೆಯಲಿಕ್ಕೆ ಪ್ಲಾನ್ ಮಾಡಬೇಕು ಅಂತನಿಸುತ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ಮನುಷ್ಯ ಮೂಲತಹ ತುಂಬಾ ಸ್ವಾರ್ಥಿ, ಸ್ವಾರ್ಥ ಬಿಟ್ಟು ಬದುಕುವುದು ಅಪರೂಪದ ಕೆಲಸ, ಅದು ಮಾಡಿ ನಾನ್ಯಾಕೆ ಬುದ್ಧನ ಶ್ರೇಣಿಗೇರಬೇಕು, ಅದರಿಂದೇನಾಗುತ್ತದೆ - ಅಂತಲೂ ಅನಿಸ್ತಿದೆ. ನಮ್ಮ ಆತ್ಮದ ಒಳಗಿರುವ ಅಹಂ ಯಾವಾಗಲೂ ಲೆಕ್ಕಾಚಾರ ಹಾಕುತ್ತಿರುತ್ತದೆ - ಅದಕ್ಕೆ ಸ್ವಾರ್ಥದಿಂದಲೇ ತೃಪ್ತಿ - ಅಲ್ವಾ...?

Monday, May 18, 2009

ಇದಪ್ಪಾ ಗೂಳಿಕುಣಿತ...!

ಈಬಾರಿ ಕೂಡ ಚೌಚೌ ಗವರ್ಮೆಂಟೇ ಬರುತ್ತೆ ಸೆಂಟರಲ್ಲಿ ಅಂತ ಎಲ್ಲಾ ಎಕ್ಸಿಟ್ ಪೋಲುಗಳೂ ಹೇಳುತ್ತಾ ಇದ್ದ ಹಾಗೆ, ಮಾರ್ಕೆಟ್ ಸ್ವಲ್ಪ ಏರಿದ ಸಮಯ ನೋಡಿ ನಾನು ಕೈಯಲ್ಲಿದ್ದ ಲಾಭದ ಸ್ಕ್ರಿಪ್ ಎಲ್ಲಾ ಮಾರಿಬಿಟ್ಟೆ. ನಾನು ಮಾರಿದ್ದು ಮಾತ್ರವಲ್ಲ, ನನ್ನಜತೆ ಆಗಾಗ ಡಿಸ್ಕಸ್ ಮಾಡುವ ಗೌಡ್ರಿಗೆ ಕೂಡ ನಾನು ಮಾಡಿದ್ದನ್ನು ಹೇಳಿದೆ, ಅವರು ಕೂಡ ಆಗಲೇ ಕೈಯಲ್ಲಿದ್ದುದೆಲ್ಲ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದರು. ಚೌಚೌ ಗವರ್ಮೆಂಟು ಬಂದ ಕೂಡಲೇ ಮಾರ್ಕೆಟ್ಟು ಹೇಗೂ ಬೀಳುತ್ತದಲ್ಲ, ಆಗ ಕಡಿಮೆಗೆ ಸಿಗುವ ಒಳ್ಳೆ ಕಂಪೆನಿ ಶೇರುಗಳನ್ನು ಕೊಳ್ಳಬೇಕೆಂಬುದು ನಮ್ಮ ಪ್ಲಾನಾಗಿತ್ತು.

ಆದರೇನು ಮಾಡಲಿ, 16ನೇ ತಾರೀಖು ಶನಿವಾರ ಫಲಿತಾಂಶ ಬರುತ್ತಾ ಬರುತ್ತಾ ಕಾಂಗ್ರೆಸ್ ಸೀಟುಗಳು 180 ದಾಟುತ್ತಿದ್ದ ಹಾಗೆ ನನಗೆ ಚಳಿ ಶುರುವಾಯಿತು... ಮಾರ್ಕೆಟ್ ಮೇಲೇರಲಿರುವುದರ ಬಗ್ಗೆ ಖುಷಿಯ ಬದಲು ದು:ಖವಾಯಿತು. ಛೇ, ಅನ್ಯಾಯವಾಗಿ ರಿಲಯನ್ಸ್ ಮತ್ತು ಐಸಿಐಸಿಐ ತುಂಬಾ ಕಡಿಮೆ ಲಾಭಕ್ಕೆ ಮಾರಿಬಿಟ್ಟೆನಲ್ಲಾ ಅಂತ ಪಶ್ಚಾತ್ತಾಪವಾಗತೊಡಗಿತು... ಬುದ್ಧ ಹೇಳಿದ ಆಸೆಯೇ ದು:ಖಕ್ಕೆ ಮೂಲ ಎಂಬ ಮಾತು ನಂಗೆ ಆದಿನ ತನ್ನ ವಿವಿಧ ಬಣ್ಣಗಳಲ್ಲಿ ಚೆನ್ನಾಗಿ ಅರ್ಥವಾಗತೊಡಗಿತು. ಒಂದು ಕಡೆ ಸ್ಥಿರ ಸರಕಾರ ಬರುವ ಸೂಚನೆಗೆ ಖುಷಿಯಾದರೆ, ಇನ್ನೊಂದು ಕಡೆ ಛೇ, ಲೆಕ್ಕಾಚಾರ ತಪ್ಪಿತಲ್ಲಾ ಅಂತ ವಿಪರೀತ ದು:ಖ... ಮನಸ್ಸಿನಲ್ಲೇ ಶೋಕಾಚರಣೆ ಮಾಡಿದೆ. ಪಾಪ, ಗೌಡರದೂ ಅದೇ ಪರಿಸ್ಥಿತಿಯಾಗಿತ್ತೇನೋ, ಸಮಾನದು:ಖಿಗಳಾಗಿದ್ದರೂ ನಾವಿಬ್ಬರೂ ಆದಿನ ಮಾತಾಡಿಕೊಳ್ಳಲಿಲ್ಲ.

ಹೂಂ, ಇರಲಿ, ಹೇಗೂ ಸೋಮವಾರ ಮಾರ್ಕೆಟ್ ಮೇಲೇರುವುದೇ ಆದರೆ, ಇರುವ ಚೂರುಪಾರನ್ನು ಬೇಗನೇ ಮಾರಿ ಹೊಸದು ತೆಗೆದುಕೊಂಡುಬಿಡುವುದು, ಮತ್ತೆ ಹೊಸ ಸರಕಾರದ ಬಜೆಟ್ ಬಂದಾಗ ಹೇಗೂ ಮತ್ತೊಂದು ಏರಿಕೆ ಇದ್ದೇ ಇರುತ್ತದೆ, ಆಗ ಮತ್ತೆ ಮಾರಿದರಾಯಿತು ಅಂತೆಲ್ಲ ಲೆಕ್ಕಹಾಕಿ ಆದಿತ್ಯವಾರವನ್ನು ಕಷ್ಟದಲ್ಲಿ ಕಳೆದಿದ್ದಾಯಿತು. ಎಲ್ಲಾ ಎಕ್ಸ್-ಪರ್ಟುಗಳೂ 500ರಿಂದ 1000 ಪಾಯಿಂಟು ಮೇಲೆ ಹೋಗಬಹುದು ಸೆನ್ಸೆಕ್ಸು ಅಂತಿದ್ರು. ಶೇಕಡಾ ಹತ್ತರಷ್ಟು ಲಾಭಕ್ಕೇನೂ ಮೋಸವಿಲ್ಲ ಅಂತ ಅಂದುಕೊಂಡು, ಸೋಮವಾರದ 9.50ರ ಶುಭಗಳಿಗೆ ಬರಲಿಕ್ಕೇ ಕಾದುಕೂತಿದ್ದೆ.


ಬಂದೇ ಬಂತು ಶುಭಸೋಮವಾರ... The Golden Monday! 9.00 ಆಗುತ್ತಿದ್ದಂತೇ CNBCTV18 ಹಾಕಿ ಉದಯನ್ ಮುಖರ್ಜಿ ಮತ್ತು ಮಿತಾಲಿ ಶೋ ನೋಡ್ತಾ ಕೂತಿದ್ದೆ. ಉದಯನ್ ಮತ್ತು ಮಿತಾಲಿ ಮಾರ್ಕೆಟ್ ಬಿದ್ದರೆ ಮುಖ ಜೋತುಹಾಕುವ Anchorಗಳು. ನೋಡುಗರ ಭಾವನೆಗಳು ಅವರಲ್ಲೂ reflect ಆಗುತ್ತಿರುತ್ತವೆ. ಅವರು ಮಾತಾಡುತ್ತಿದ್ದಂತೇ, ಮಾರುಕಟ್ಟೆ 10% ಮೇಲೆ ಹೋದರೆ 1 ಗಂಟೆ ಟ್ರೇಡಿಂಗ್ ಇರುವುದಿಲ್ಲ, 15% ಮೇಲೇರಿದರೆ 2 ಗಂಟೆ ಬಂದ್ ಇತ್ಯಾದಿ ಮಾಹಿತಿಗಳು ಬರ್ತಾ ಇತ್ತು.

ಆಯ್ತು, 9.50 ಆಗಿಯೇ ಹೋಯ್ತು... ಅಷ್ಟೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗಾಗಿ ಸೆನ್ಸೆಕ್ಸ್ 1300 ಅಂಕ ಮೇಲೇರಿತು, ಕೂಡಲೇ ಟ್ರೇಡಿಂಗ್ ಬಂದ್! ಇಷ್ಟಾಗಲಿಕ್ಕೆ ಮಾರ್ಕೆಟ್ ಓಪನ್ ಆಗಿ 20 ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ.

ನಾನು ಇಂಗು ತಿಂದ ಮಂಗನಂತೆ ಏನಾಗುತ್ತಿದೆಯೆಂದೇ ಅರ್ಥವಾಗದೆ ಉದಯನ್ ಮತ್ತು ಮಿತಾಲಿ ಹೇಳುವುದನ್ನೇ ಕೇಳುತ್ತ ಕೂತೆ. ಒಂದು ಗಂಟೆಯ ನಂತರ ಮತ್ತೆ ಮಾರುಕಟ್ಟೆ ತೆರೆಯಲಿದೆ ಎಂದು ಒಂದು ಸಾರಿ ಹೇಳಿದರೆ ಮತ್ತೆ ಎರಡು ಗಂಟೆಯ ನಂತರ ತೆರೆಯಲಿದೆ ಎಂದರು. ಇದಕ್ಕೆ ಕಾದು ಕೂತರೆ ಅಷ್ಟೇ ಗತಿ ಮತ್ತೆ ಅಂತ ನನಗೆ ನಾನೇ ಬುದ್ಧಿ ಹೇಳಿಕೊಂಡು ಆಫೀಸಿಗೆ ಹೊರಟೆ.

ಆಫೀಸಲ್ಲಿದ್ದರೂ, ಕೆಲಸ ಶುರುಮಾಡಿಕೊಂಡರೂ ಮಾರುಕಟ್ಟೆ ಏನಾಗುತ್ತದೋ ಎಂಬ ಕಪಿಕುತೂಹಲ ಸುಮ್ಮನೆ ಕೂರಲು ಬಿಡಲಿಲ್ಲ. ಸಮಾನಮನಸ್ಕರೆಲ್ಲ ಜತೆ ಸೇರಿ 11.45 ಆಗುತ್ತಿದ್ದಂತೆಯೇ ಐಬಿಎನ್ ಹಾಕಿ ಕೂತೆವು. 11.50 ಆಗುತ್ತಿದ್ದಂತೇ ಅಲ್ಲಿ CNBCTV18 ಪಂಚ್ ಆಯಿತು. ಈಗಲೂ ಅಷ್ಟೇ. ಮಾರುಕಟ್ಟೆ ಓಪನ್ ಆದಕೂಡಲೇ 700ರಷ್ಟು ಅಂಕಗಳು ಮೇಲೇರಿತು... And trading halted for the day!


Historical. Fantastic. Amazing. Wonderful. Unbelievable. Unpredictable. ಇನ್ನೇನು ಹೇಳಬಹುದೋ ಗೊತ್ತಿಲ್ಲ. ನಿಫ್ಟಿಯನ್ನು 650 ಅಂಕಗಳಿಂದ, ಸೆನ್ಸೆಕ್ಸನ್ನು 2110 ಅಂಕಗಳಿಂದ ಏರಿಸಿ, ಎಲ್ಲಾ ಮಿತಿಗಳನ್ನ ದಾಟಿ ನರ್ತಿಸಿತ್ತು ಗೂಳಿ! ಕರಡಿಗಳಿಗೆಲ್ಲ ಬೇಸರವಾಗಬೇಕಾದದ್ದೇ. ನಾನು 520ಕ್ಕೆ ಮಾರಿದ್ದ ಐಸಿಐಸಿಐ 745 ಮುಟ್ಟಿತ್ತು. ಇಷ್ಟರಲ್ಲಿ ನಾನು ಬುದ್ಧನ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನಂಗೆ ಬೇಸರವಾಗಲಿಲ್ಲ, ಬದಲಿಗೆ ಸಖತ್ ಖುಷಿಯಾಯಿತು.

Anchor ಮಿತಾಲಿ ನಗುನಗುತ್ತಾ ಏನೇನೋ ಹೇಳಿದಳು, ಒಂದು ಬಾರಿ ತನ್ನ anchoring seatನಿಂದ ಎದ್ದು ಮೈಮುರಿದಳು, ಅವಳು ಅಷ್ಟು ಖುಷಿಯಾಗಿದ್ದು ನಾ ಎಂದೂ ನೋಡಿರಲಿಲ್ಲ. ಇನ್ನು ನಂಗೆ ಇವತ್ತಿಗೆ anchoring ಮಾಡುವ ಕೆಲಸವಿಲ್ಲ, ಇವತ್ತೆಲ್ಲಾ ಆರಾಮ, ಇನ್ನು ಟ್ರೇಡಿಂಗ್ ಇಲ್ಲ, ಇನ್ನು ಕರಡಿ ಕುಣಿತವಿಲ್ಲ, ಮಾರ್ಕೆಟ್ ಏರುತ್ತಿದೆ, ನಾನಿನ್ನು ಮುಖ ಬಾಡಿಸಲಿಕ್ಕಿಲ್ಲ ಇತ್ಯಾದಿ ಅವಳು ಹೇಳಿದ ಹಾಗೆ ನನಗನಿಸಿತು. ಉದಯನ್ ಅಂತೂ ...! ತನ್ನ ಲ್ಯಾಪ್ಟಾಪ್ ಎತ್ತಿ ಅದಕ್ಕೊಂದು ಕಿಸ್ ಕೊಟ್ಟು, ಫುಲ್ ಖುಷ್ ಆಗಿ ಹಲ್ಲುಬಿಟ್ಟು... ಅವರ ಖುಷಿಯನ್ನು ವೈರಸ್ ಥರಾ ನಮ್ಮಮೇಲೆಲ್ಲ ಬಿಟ್ಟು... ಆಹಾ! ಖುಷಿಗೆ ಅವರಿಬ್ಬರು ಹಾರ್ಟ್ ಫೇಲ್ ಒಂದು ಮಾಡಿಕೊಂಡಿಲ್ಲ ನೋಡಿ.

ಸ್ಟಾಕ್ ಮಾರ್ಕೆಟ್ ಹಿಸ್ಟರಿಯಲ್ಲೇ ಇದು ಐತಿಹಾಸಿಕ ದಿನವಂತೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಗೌಡ್ರೂ ನನ್ನದೇ ಪರಿಸ್ಥಿತಿಯಲ್ಲಿದ್ದರು, ಹಾಗೆ ಮುಕ್ತವಾಗಿ ನಾಕುಮಾತು ಸುಖದು:ಖ ಹಂಚಿಕೊಂಡು ಹಗುರಾದೆವು.

ಸದ್ಯದ ಆರ್ಥಿಕ ಹಿಂಜರಿತದಿಂದ ಮೇಲೇಳಲಿಕ್ಕಾಗಿ ಇಡೀ ಜಗತ್ತು ಭಾರತ ಮತ್ತು ಚೀನಾದೆಡೆಗೆ ನೋಡುತ್ತಿರುವ ಈ ಕಾಲಘಟ್ಟ... ಎಡ-ಬಲಗಳನ್ನು ಬಿಟ್ಟು ಮಧ್ಯವನ್ನು ಆಯ್ಕೆ ಮಾಡಿ ಸುಭದ್ರತೆಯ ತೀರ್ಪು ನೀಡಿದೆ ಭಾರತ. ನಾಳೆ ಮಾರುಕಟ್ಟೆ ಮತ್ತೂ ಮೇಲೇರಬಹುದೇನೋ... ಏನಾಗಬಹುದೆಂದು ಊಹಿಸುವುದು ಸದ್ಯಕ್ಕೆ ನನ್ನ ಮಿತಿಗೆ ಮೀರಿದ್ದು. ಆದರೆ ಇವತ್ತು ಮಾತ್ರ ನಾನು ಖುಷ್... :-)